Thursday, January 20, 2011

ಕನ್ನಡ-ಬಾಲ್ಯ ಕನ್ನಡದ ಮಗುವಿಗೆ ಅಗತ್ಯ!

ಮಗುವಿನ ಮನಸ್ಸು ನಿರ್ಮಲವಾದದ್ದು. ಸುತ್ತಲ ಪರಿಸರದಿಂದ ಆಗುವ ಅನುಭವಗಳನ್ನೇ ಮೆಟ್ಟಿಲಾಗಿಸಿಕೊಂಡು ಮುಂದೆ ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತವೆ. ಅದಕ್ಕೆ ಹೇಳೋದು ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು. ಅದಕ್ಕೆ ಡಿ.ಎಸ್.ರಾಮಸ್ವಾಮಿ ಹೇಳ್ತಾರೆ, "ಬಾಲ್ಯದಲ್ಲಿ ಕಲಿತ ಬುದ್ಧಿ-ಮನಸ್ಸುಗಳೇ ಮುಂದಿನ ದಿನಮಾನಗಳನ್ನು ರೂಪಿಸುವುದರಿಂದ ಎಲ್ಲರ ಬಾಲ್ಯವೂ ಪರಿಶುದ್ಧವಾಗಿರುತ್ತದೆ ಎನ್ನುವ ಮಾತೂ ಇದೆ. ಹಸಿವು, ನೀರಡಿಕೆ, ನಿದ್ದೆಗಳು ಮಾತ್ರ ಮಕ್ಕಳು ದೊಡ್ಡವರನ್ನು ಕಾಡುವಂತೆ ಮಾಡುತ್ತವೆ. ಉಳಿದಂತೆ ಮಕ್ಕಳ ಮನಸ್ಸು ಎಷ್ಟು ನಿರ್ಮಲವಾಗಿರುತ್ತದೆ ಅಂದರೆ ಅದಕ್ಕೆಂದೇ ನಮ್ಮ ಹಿರಿಯರು ಮಕ್ಕಳನ್ನೂ ದೇವರ ಸ್ವರೂಪ ಅಂತ ಕರೆದದ್ದು. ಕೂಡು ಕುಟುಂಬ ವ್ಯವಸ್ಥೆ ಇದ್ದಷ್ಟೂ ದಿನ ಮಕ್ಕಳು ಪಂಕ್ತಿಭೇದವಿಲ್ಲದೇ, ತರತಮಗಳ ಸೋಂಕಿಲ್ಲದೇ ಉಂಡು ಆಡಿ ನಲಿಯುತ್ತಿದ್ದವು. ಅಜ್ಜನೋ, ಅಜ್ಜಿಯೋ. ದೊಡ್ಡಮ್ಮ, ದೊಡ್ಡಪ್ಪನೋ ನೀತಿ ಕತೆಗಳನ್ನು ಹೇಳುವ ಮೂಲಕ ಒಳಿತು ಕೆಡುಕಗಳ ವ್ಯತ್ಯಾಸವನ್ನು ಮನದಟ್ಟು ಮಾಡಿ ಮಗುವಿನ ಮನಸ್ಸಿನಲ್ಲಿ ನೈತಿಕತೆಯ ಬೀಜನೆಟ್ಟು ಬೆಳಸಿರುತ್ತಿದ್ದರು. ಅವರು ಕಲಿಸುವ ಬಾಯಿಪಾಠ, ಮಗ್ಗಿ, ಶ್ಲೋಕ, ಕತೆ, ಜನಪದ ಹಾಡುಗಳು, ಅಲ್ಲದೇ, ಉಳಿದ ಮಕ್ಕಳೊಂದಿಗೆ ಬೆರೆತು ಆಡಿ ನಲಿದು ಬಾಲ್ಯವೆಂಬ ಬೆಲ್ಲದ ರುಚಿ ನಿರಂತರ ಉಳಿಯುವಂತೆ ಅದನ್ನು ಸವಿಯುತ್ತಿದ್ದವು. ನಮ್ಮ ಜನಪದರು ಸೃಷ್ಟಿಸಿರುವ ಕತೆ ಹಾಡುಗಳಲ್ಲಂತೂ ಮಕ್ಕಳಿಗೆ ಇಷ್ಟವಾಗುವ ಗಿಡ,ಮರ,ಪಶು, ಪಕ್ಷಿಗಳೂ ಮಾತನಾಡಿ ಬದುಕಿನ ಸೂಕ್ಷ್ಮಗಳನ್ನು ಮಗುವಿನ ಮನಸ್ಸಿನೊಳಗಿಳಿಸಿ ಆ ಮಗು ತನ್ನ ಭಾವೀ ಜೀವನ ರೂಪಿಸಿಕೊಳ್ಳುವ ನಿಜದ ಯತ್ನವಾಗಿ ಇರುತ್ತಿತ್ತು. ಊರೊಳಗಿನ ಉತ್ಸವ, ಜಾತ್ರೆ, ಹಬ್ಬಗಳಲ್ಲಿ ಮನೆಯವರೆಲ್ಲ ಭಾಗವಹಿಸುವ ಮೂಲಕ ಮನುಷ್ಯ ಸಂಬಂಧಗಳ ಅನಾವರಣವನ್ನು ತಮಗೆ ಗೊತ್ತಿಲ್ಲದೇ ಮಕ್ಕಳು ಅರಿಯುತ್ತಿದ್ದವು. ಶಾಲೆ ಮುಗಿದ ಮೇಲೆ ದೊಡ್ಡಬಯಲಲ್ಲಿ ಚಿನ್ನಿದಾಂಡು, ಕಬಡ್ಡಿಗಳನ್ನಾಡಿ ಊರ ಹೊರಗಿನ ತೋಪಿನಲ್ಲಿ ಮರಕೋತಿ ಆಟವಾಡಿ, ರಜಾ ದಿನಗಳಲ್ಲಿ ಹಳ್ಳದಲ್ಲಿ ಈಜಿ ದೈಹಿಕ ಸಾಮರ್ಥ್ಯದ ಜೊತೆಜೊತೆಗೇ ತಾರ್ಕಿಕ ಪ್ರಜ್ಞೆಯನ್ನೂ ಹಿಂದಿನ ಕಾಲದ ಮಕ್ಕಳು ಪಡೆಯುತ್ತಿದ್ದರು."

ಮನೆತುಂಬ ಮಕ್ಕಳಿರುವ ಕಾಲ ಈಗ ಬದಲಾಗಿದೆ. ವಿಘಟಿತ ಕುಟುಂಬ ವ್ಯವಸ್ಥೆ ಎಲ್ಲ ಮನೆ ಊರುಗಳಲ್ಲೂ ವಿಸ್ತರಿಸಿ ನಗರೀಕರಣದ ನೆರಳು ಮನೆಗೊಂದೇ ಮಗುವೆಂಬ ಸೂತ್ರವನ್ನು ಪಠಿಸಿ,ಹೆತ್ತವರ ಹಣೆಯಲ್ಲಿ ಮಗುವಿನ ಭವಿಷ್ಯದ ಚಿಂತೆಯ ಗೆರೆಯನ್ನು ಢಾಳಾಗಿಸಿದೆ. ಬಾಲ್ಯದ ಆಟೋಟಗಳಿಗಿಂತಲೂ ಅರಿವಿರದ ಭಾಷೆಯ ರೈಮುಗಳನ್ನು ಮನಸ್ಸಿಗೊಗ್ಗದ ಶೈಲಿಯಲ್ಲಿ ಹಾಡಿಸುತ್ತ, ಕೃತಕತೆಯನ್ನೆ ಸಹಜವೆಂದುಕೊಳ್ಳುವ ಹಾಗೆ ಬೆಳಸುತ್ತ ನೈಸರ್ಗಿಕವಾಗಿ ಬಿಡುಗಡೆಯಾಗಬೇಕಿರುವ ಮುಗ್ಧತೆಯ ಆವರಣಕ್ಕೆ ಕೌಶಲ್ಯದ ಹೆಸರಿನ ಮೇಲಾಟಗಳು ದಾಳಿ ಇಟ್ಟಿವೆ. ಸಹಜವಾದ ಬೇಕು ಬೇಡಗಳಿಗಿಂತಲೂ ಒತ್ತಾಯದ ಹೇರಿಕೆಗಳು ಮಕ್ಕಳ ಮುಗ್ಧತೆಯನ್ನೇ ಆಪೋಷನ ತೆಗೆದುಕೊಂಡಿವೆ. ‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು’ ಎಂದು ಹೇಳುತ್ತಲೇ ಆ ಮಕ್ಕಳನ್ನು ಇರುಳು ಕಂಡ ಬಾವಿಗೆ ಹಗಲಲ್ಲಿ ನೂಕುವ ಕಾಯಕ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತಿದೆ, ಅಷ್ಟೆ.

ಮಕ್ಕಳ ಮನಸ್ಸಿನ ವಿಕಾಸತೆಗೆ ತಾಯಿನುಡಿಯ ಅವಶ್ಯಕತೆ ಅಪಾರ. ಪ್ರಾಥಮಿಕ ಶಿಕ್ಷಣ ತಾಯಿನುಡಿಯಿಂದಾಗ ಮಾತ್ರ ಅವರ ಯೋಚನಲಹರಿ ಗಡಿಗಳನ್ನು ದಾಟಿ ಹಾರುವುದ್ದಕ್ಕೆ ಸಾದ್ಯ. ಇದನ್ನರಿಯದೆ ದುಡ್ಡು ಮಾಡೋ ತವಕದಲ್ಲಿ, ಮಕ್ಕಳ ಬಾಲ್ಯವನ್ನೇ ಕೊಲ್ಲುತ್ತಿದ್ದೇವೇನೋ  ಎಂಬ ಪಾಪಪ್ರಜ್ಞೆ!