Saturday, December 8, 2007

"ಜೀವ ಸೃಷ್ಟಿ-೧"

ಅತೀ ಸೂಕ್ಷ್ಮ ಜೀವಾಣು "ಬ್ಯಾಕ್ಟೀರಿಯ" ದಿಂದ ಹಿಡಿದು ರಕ್ಕಸ ಗಾತ್ರದ ನೀಲಿ ತಿಮಿಂಗಲಾ(Blue Whale) ವರೆಗೂ ಎಲ್ಲಾ ಪ್ರಾಣಿಗಳ ಮಾರ್ಪಾಡು ಪ್ರಾರಂಭವಾಗಿರುವುದು ಜೀವ ಕೋಶ(Cell)ದಿಂದ. ಇದು ತುಂಬ ಸರಳವೆನಿಸಿದರೂ ವೈಜ್ಞಾನಿಕವಾಗಿ ಒಂದು "ಪ್ರಾಣಿ ಜೀವಿ"ಯನ್ನು "ಜೀವಿಸುತ್ತಿರುವ ಪ್ರಾಣಿ" (living being) ಎಂದು ಕರೆಯಲು ಕೆಲವು ಪ್ರಮುಖ ಗುಣಗಳು ಆ ಪ್ರಾಣಿಗಿರಬೇಕು.

ಉದಾಹರಣೆಗೆ...

೧. ಸ್ವಯಂ-ಸಂರಕ್ಷಣೆ: ತನ್ನ ಅಸ್ತಿತ್ವವನ್ನ ತಾನೆ ಕಾಪಾಡಿಕೊಂಡು ಜೀವಿಸುವ ಗುಣ.

೨. ಸ್ವಯಂ-ಸಂತಾನೋತ್ಪತ್ತಿ: ತನ್ನ ಸಂತತಿಯನ್ನು ಬೆಳೆಸಿಕೊಳ್ಳುವುದು.

೩. ಉಸಿರಾಟ ಕ್ರಿಯೆ: ಶಕ್ತಿಯ ಒಂದು ರೂಪವನ್ನು ಇನ್ನೊಂದು ರೂಪಕ್ಕೆ ಪರಿವರ್ತಿಸಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು.

೪. ಸ್ಥಿರತೆ: ಹೊರ ಪ್ರಪಂಚದ ವೈಪರಿತ್ಯಗಳಿಗೆ ಸೋಲದೆ ಸ್ಥಿರವಾಗಿ ಮುಂದುವರೆಯುವುದು.

೫. ನಿಯಂತ್ರಣ: ದೇಹದ ಹಲವಾರು ಭಾಗಗಳ ಪರಸ್ಪರ ಸಹಕಾರದಿಂದ ತನ್ನ ಜೀವ ಮತ್ತು ಗುರುತನ್ನು ಕಾಪಾಡಿಕೊಳ್ಳುವುದು.

೬. ಜೀವ ವಿಕಾಸ (Evolution): ಪರಿಸರದ ವೈಪರಿತ್ಯಗಳೊಡನೆ ನಿರಂತರ ಸೆಣೆಸಾಟದಿಂದ ತನ್ನ ಸಂತತಿಯ ಏಳಿಗೆಯನ್ನು ಸಾಧಿಸುವುದು.

೭. ಸಾವು: ಮೇಲಿನೆಲ್ಲಾ ಗುಣಗಳ ಕೊನೆ!


ಈ ಎಲ್ಲಾ ಗುಣ/ಕಾರ್ಯಗಳನ್ನು ನಿರ್ಧರಿಸುವುದು ಜೀವ ಕೋಶಗಳಲ್ಲಿರುವ DNA (deoxy-ribonuclei acid) ಎಂಬ ಅಂಶ. ವಿಕಾಸವಾದದ ಬೇರುಗಳು ಇಲ್ಲಿಂದಲೇ ಆರಂಭ. ಈ DNA ಯಲ್ಲಿ ಉಂಟಾಗುವ ಏರು-ಪೇರುಗಳು ಪರಿಸರದ ವೈಪರಿತ್ಯಗಳೊಡನೆ ಪ್ರಾಣಿಯ ಸೆಣೆಸಾಟ, ಉಳಿವು ಹಾಗು ತನ್ನ ಸಂತತಿಯ ಪುನರುತ್ಪಾದನೆಯ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ (Natural selection and survival of the fittest). ನಿರಂತರವಾಗಿ ಬದಲಾಗುತ್ತಿರುವ ಪರಿಸರದಲ್ಲಿ ಯಶಸ್ವಿಯಾಗಿ ಬದುಕುಳಿದ ಪ್ರಾಣಿಗಳು ತಮ್ಮ ಸಂತತಿಯನ್ನು ಮುಂದುವರೆಸುತ್ತವೆ.

1 comment:

Anonymous said...

ವೈಜ್ಞಾನಿಕ ಪದಗಳನ್ನೂ ಕೂಡ ಕನ್ನಡಕ್ಕೆ ಅನುವಾದ ಮಾಡಿರುವ ಪರಿ ನಿಜಕ್ಕೂ ಶ್ಲಾಘನೀಯ.
ಡಾರ್ವಿನ್ ಸಿದ್ಧಾಂತ ಹೇಳುತಿರುವಂತೆ ಕಾಣುತ್ತದೆ.
ನಿಮ್ಮ ಮುಂದಿನ ವಿಷಯಕ್ಕಾಗಿ ಕಾಯುತಿರುವೆ.