Monday, December 24, 2007

ನಾಗರಿಕತೆಯ ಸೃಷ್ಟಿ- ೧

ಪ್ರಾಣಿಗಳಂತೆ ವರ್ತಿಸುತ್ತಿದ್ದ ಮಾನವರು, ಆಹಾರ-ವಸತಿಗಾಗಿ ತಮ್ಮ-ತಮ್ಮಲ್ಲೇ ಹೋರಾಟ ನಡೆಸಿ, ಒಬ್ಬರನ್ನೊಬ್ಬರು ಕೊಲ್ಲತೊಡಗಿದರು. ಹೀಗಾಗಿ, ಕಿತ್ತಾಡುವ ಮಾನವ ತಳಿಗಳು (species) ತಾವಾಗೆ ನಾಶವಾಗುತ್ತ ಬಂದವು. ಕಾಲ ಕ್ರಮೇಣ ಈ ವರ್ತನೆಯಿಂದ ದೂರವುಳಿದ ಮಾನವ ಜೀವಿಗಳ ಸಂಖ್ಯೆ ಅಧಿಕವಾಗಿ ಒಬ್ಬರಿಗೊಬ್ಬರು ಸಹಾಯ ಮಾಡುತ್ತ ಬೇರೆ ಪ್ರಾಣಿ-ಪಕ್ಷಿಗಳ ಅನುಕೂಲ ಪಡೆಯುತ್ತ ತಮ್ಮ ತಳಿಯನ್ನು ಕಾಪಾಡಿಕೊಳ್ಳ ತೊಡಗಿದರು.


ಮಾನವ, ಭೂಮಿಯ ಹಲವಾರು ಭಾಗಗಳನ್ನು ತನ್ನ ಜೀವನಾನುಕೂಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಳುತ್ತ ನಾಗರಿಕತೆಯಾ ತೊಟ್ಟಿಲ್ಲನ್ನು ತೂಗ ತೊಡಗಿದ. ಆಹಾರಕ್ಕಾಗಿ ಸಿಕ್ಕ ಪ್ರಾಣಿ-ಪಕ್ಷಿಗಳನ್ನೂ ಕೊಲ್ಲುತ್ತ, ಮರ-ಗಿಡಗಳಿಂದ ದೊರುಕುವ ಎಲೆ, ಹಣ್ಣುಗಳನ್ನೂ ತಿನ್ನುತ್ತ ತನ್ನ ತಳಿಯಾ ಅಭಿವೃದ್ಧಿಯನ್ನು ಕಂಡು ಕೊಂಡ. ಬೇಟೆ, ಬೆಂಕಿ, ಅಡಿಗೆ, ವ್ಯವಸಾಯ ಹಾಗು ಅದಕ್ಕೆ ಬೇಕಾಗುವ ಸಲಕರಣೆಗಳ ರಚನೆ; ಹೀಗೆ ತನ್ನ ಬುದ್ದಿಶಕ್ತಿಯ ಉಪಯೋಗವನ್ನು ಎಲ್ಲದರಲ್ಲೂ ಬಳಸುತ್ತಲೇ ಬಂದ.

Friday, December 21, 2007

ಬಾಲ ಹೋಗಿ ಬುದ್ದಿ ಬಂತು!

ಬಾಲ ಹೋಗಿ ಬುದ್ದಿ ಬಂತು!

DNA ಯಲ್ಲಿನ ಈ ಶೇಕಡ ೧ ರಸ್ಟು ವ್ಯತ್ಯಾಸವೇ ಮಾನವನ ಬುದ್ದಿ ಶಕ್ತಿಗೆ ಕಾರಣವಾಗಿರುವುದು. ಪರಿಸರದಲ್ಲಿನ ವಿಕೋಪಗಳಿಗೆ ತಕ್ಕಂತೆ ದೇಹದ ಮಾರ್ಪಾಡುಗಳೊಂದಿಗೆ ಮೆದುಳಿನ ವಿಕಾಸನೆಯು ನಡೆದು ಬಂದಿದೆ. ದೊರಕಿರುವ ಪಳೆಯುಳಿಕೆ ಹಾಗು ಹಲವಾರು ವೈಜ್ಞಾನಿಕ ಪರಿಶೀಲನೆಗಳ ಆಧಾರದ ಮೇಲೆ ಹೇಳುವದಾದರೆ, ಮಾನವ ಜೀವಿಯ ವಿಕಾಸನೆ ಸಹಸ್ರ ಸಹಸ್ರಾರು ವರ್ಷಗಳ ಹಿಂದೆ ಮಧ್ಯ ಆಫ್ರಿಕಾದಲ್ಲಿ ಪ್ರಾರಂಭಗೊಂಡು, ಸುಮಾರು ೨೦೦,೦೦೦ ವರ್ಷಗಳ ಹಿಂದೆ ನಮ್ಮ ಮೆದುಳಿನ ರಚನೆ ಪ್ರಾರಂಭವಾಗಿದೆ.

ಮೆದುಳಿನ ವಿಕಾಸನೆಗೆ ಆಧಾರವಾಗಿ ದೊರಕಿರುವ ಇನ್ನೊಂದು ಅಂಶವೆಂದರೆ ತಲೆಬುರುಡೆಯ ತೂಕ ಮತ್ತು ಗಾತ್ರ. ೧೦೦ ಗ್ರಾಂ ಇದ್ದ ಮೆದುಳು ಮಾನವನಲ್ಲಿ ೧೫೦೦ ಗ್ರಾಂ ಆಗಿರುವುದು!

ಹಾಗೆಯೇ ನಡೆದುಬಂದ ಮಂಗ-ಮಾನವನ ಬೆಳವಣಿಗೆ ಸುಮಾರು ೮೦,೦೦೦ ವರ್ಷಗಳ ಹಿಂದೆ ಚಿಂಪಾಂಜಿಯಿಂದ ದೂರವಾಗಿ ಮನುಷ್ಯನ ರೂಪು ಪಡೆದಿದೆ.
ಹೀಗೆ ಮಂಗನಿಂದ ಮಾನವನಾದ "ಮನುಷ್ಯ", ಇಡೀ ಭೂಮಿಯನ್ನೇ ತನ್ನ ಮನೆಯಾಗಿಸಿಕೊಂಡು ಬೇರೆಲ್ಲ ಜೀವ ಸಂಕುಲಗಳಿಂದ ಉಪಯೋಗ ಪಡೆದುಕೊಂಡು ತನ್ನ ಬೆಳವಣಿಗೆಯ ಶಿಖರವನ್ನು ಏರುತ್ತಲೇ ಹೊರಟಿದ್ದಾನೆ.

Friday, December 14, 2007

ವಿವಿಧ ಜೀವಿಗಳ ಸೃಷ್ಟಿ

ಜೀವ ಸೃಷ್ಟಿಯಾ ನಿಜ ಕತೆಯನ್ನು ಮುಂದುವರಿಸುತ್ತಾ...
ವಿವಿಧತೆಗೆ ಕಾರಣವೇನು?

adenine, guanine, thaimine ಮತ್ತು cytosine ಎಂಬ ನಾಲ್ಕು ರಾಸಾಯನಿಕ ಕಣಗಳ (nucleotides) ವಿವಿಧ ಜೋಡಣೆಯ ರೂಪವಾದ DNA, ಪ್ರಪಂಚದ ಮೇಲಿರುವ ಎಲ್ಲ ಜೀವ ಸಂಕುಲದ ಅಗಾಧ ವಿವಿಧತೆಗೆ ಕಾರಣವೆಂಬುದನ್ನು ನಂಬಲಸಾದ್ಯವಾದರು ನಿಜ. ಈ ನಾಲ್ಕು nucleotides ಗಳ ಜೋಡಣೆಯಲ್ಲಿ ಉಂಟಾಗುವ ಏರು-ಪೇರುಗಳು ಒಂದು ಕೋಶದ (single celled) ಜೀವಿಗಳಾದ ಬ್ಯಾಕ್ಟೀರಿಯದಿಂದ ಪ್ರಾರಂಭವಾಗಿ ಅತೀ ಸಂಕೀರ್ಣ ಮಾನವ ಜೀವಿಗಳ ರಚನೆಗೆ ತಳಹದಿ!
ವಿಕಾಸವಾದದ ಬೇರಾದ ಈ ಪರಿಷ್ಕರಣೆಯನ್ನು ಸಮರ್ಥಿಸುವಲ್ಲಿ ನಮ್ಮ ತೀರ ಹತ್ತಿರ ಸಂಬಧಿಗಳಾದ ಚಿಂಪಾಂಜಿಯಾ DNA ರಚನೆ ತುಂಬ ಸಹಕಾರಿಯಾಗಿದೆ. ಈ ರಚನೆ ಶೇಕಡ ೯೯ ರಸ್ಟು ಮಾನವ DNA ಗೆ ಸಮನಾಗಿರುವುದು ಅಚ್ಚರಿ ಹಾಗು ಕುತೂಹಲವನ್ನು ಕೆರಳಿಸುತ್ತದೆ.

Saturday, December 8, 2007

"ಜೀವ ಸೃಷ್ಟಿ-೧"

ಅತೀ ಸೂಕ್ಷ್ಮ ಜೀವಾಣು "ಬ್ಯಾಕ್ಟೀರಿಯ" ದಿಂದ ಹಿಡಿದು ರಕ್ಕಸ ಗಾತ್ರದ ನೀಲಿ ತಿಮಿಂಗಲಾ(Blue Whale) ವರೆಗೂ ಎಲ್ಲಾ ಪ್ರಾಣಿಗಳ ಮಾರ್ಪಾಡು ಪ್ರಾರಂಭವಾಗಿರುವುದು ಜೀವ ಕೋಶ(Cell)ದಿಂದ. ಇದು ತುಂಬ ಸರಳವೆನಿಸಿದರೂ ವೈಜ್ಞಾನಿಕವಾಗಿ ಒಂದು "ಪ್ರಾಣಿ ಜೀವಿ"ಯನ್ನು "ಜೀವಿಸುತ್ತಿರುವ ಪ್ರಾಣಿ" (living being) ಎಂದು ಕರೆಯಲು ಕೆಲವು ಪ್ರಮುಖ ಗುಣಗಳು ಆ ಪ್ರಾಣಿಗಿರಬೇಕು.

ಉದಾಹರಣೆಗೆ...

೧. ಸ್ವಯಂ-ಸಂರಕ್ಷಣೆ: ತನ್ನ ಅಸ್ತಿತ್ವವನ್ನ ತಾನೆ ಕಾಪಾಡಿಕೊಂಡು ಜೀವಿಸುವ ಗುಣ.

೨. ಸ್ವಯಂ-ಸಂತಾನೋತ್ಪತ್ತಿ: ತನ್ನ ಸಂತತಿಯನ್ನು ಬೆಳೆಸಿಕೊಳ್ಳುವುದು.

೩. ಉಸಿರಾಟ ಕ್ರಿಯೆ: ಶಕ್ತಿಯ ಒಂದು ರೂಪವನ್ನು ಇನ್ನೊಂದು ರೂಪಕ್ಕೆ ಪರಿವರ್ತಿಸಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು.

೪. ಸ್ಥಿರತೆ: ಹೊರ ಪ್ರಪಂಚದ ವೈಪರಿತ್ಯಗಳಿಗೆ ಸೋಲದೆ ಸ್ಥಿರವಾಗಿ ಮುಂದುವರೆಯುವುದು.

೫. ನಿಯಂತ್ರಣ: ದೇಹದ ಹಲವಾರು ಭಾಗಗಳ ಪರಸ್ಪರ ಸಹಕಾರದಿಂದ ತನ್ನ ಜೀವ ಮತ್ತು ಗುರುತನ್ನು ಕಾಪಾಡಿಕೊಳ್ಳುವುದು.

೬. ಜೀವ ವಿಕಾಸ (Evolution): ಪರಿಸರದ ವೈಪರಿತ್ಯಗಳೊಡನೆ ನಿರಂತರ ಸೆಣೆಸಾಟದಿಂದ ತನ್ನ ಸಂತತಿಯ ಏಳಿಗೆಯನ್ನು ಸಾಧಿಸುವುದು.

೭. ಸಾವು: ಮೇಲಿನೆಲ್ಲಾ ಗುಣಗಳ ಕೊನೆ!


ಈ ಎಲ್ಲಾ ಗುಣ/ಕಾರ್ಯಗಳನ್ನು ನಿರ್ಧರಿಸುವುದು ಜೀವ ಕೋಶಗಳಲ್ಲಿರುವ DNA (deoxy-ribonuclei acid) ಎಂಬ ಅಂಶ. ವಿಕಾಸವಾದದ ಬೇರುಗಳು ಇಲ್ಲಿಂದಲೇ ಆರಂಭ. ಈ DNA ಯಲ್ಲಿ ಉಂಟಾಗುವ ಏರು-ಪೇರುಗಳು ಪರಿಸರದ ವೈಪರಿತ್ಯಗಳೊಡನೆ ಪ್ರಾಣಿಯ ಸೆಣೆಸಾಟ, ಉಳಿವು ಹಾಗು ತನ್ನ ಸಂತತಿಯ ಪುನರುತ್ಪಾದನೆಯ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ (Natural selection and survival of the fittest). ನಿರಂತರವಾಗಿ ಬದಲಾಗುತ್ತಿರುವ ಪರಿಸರದಲ್ಲಿ ಯಶಸ್ವಿಯಾಗಿ ಬದುಕುಳಿದ ಪ್ರಾಣಿಗಳು ತಮ್ಮ ಸಂತತಿಯನ್ನು ಮುಂದುವರೆಸುತ್ತವೆ.

Friday, December 7, 2007

"ಜೀವ ಸೃಷ್ಟಿ"

ಪ್ರತಿಯೊಬ್ಬರೂ ತಮ್ಮದೇ ಆದ ಅನುಭವಗಳನ್ನಾಧರಿಸಿ ಮನಸ್ಸಿಗೆ ತೃಪ್ತಿ ನೀಡುವಂತ "ವ್ಯಾಖ್ಯಾನ" ದೊಂದಿಗೆ "ಜೀವನ"ದ ಅರ್ಥ ಕಂಡು ಕೊಳ್ಳುತ್ತಾರೆ. ವಿಜ್ಞಾನದ ಮಡಿಲಿಗೆ ಮೊರೆ ಹೋದಾಗ ದೊರಕುವ ಜೀವನದ ಅರ್ಥವೇ ಬೇರೆ! ಏನದು???
ಉತ್ತರವನ್ನ ಸದ್ಯದಲ್ಲೇ ನೀರಿಕ್ಷಿಸಿ...

Thursday, December 6, 2007

ಮಂಥನಗಳಿಂದ ಮನಸ್ಸಿಗೆ ಮನವರಿಕೆಯಾದ ವಿಷಯಗಳ ಚಿತ್ತಾರವೇ ಈ "ಸೃಷ್ಟಿ".

ನಲ್ಮೆಯ ಓದುಗರೇ,

ಅನುಭವಗಳಿಂದ ಹುಟ್ಟುವ ಅಕ್ಷರ ರೂಪಕ್ಕೆ ಸರಿ-ತಪ್ಪುಗಳ ನಿಯಮವಿಲ್ಲ, ಆಳದ ಪರಿವೆಯೂ ಇಲ್ಲ.
ಅದರ ಶಕ್ತಿಯನ್ನೋಪಯೋಗಿಸಿ ಇಂದಲ್ಲ ನಾಳೆ, ಅಗೋಚರವಾದ ಮನಸ್ಸಿನ ಮೂಲ ಅಕ್ಷರಗಳಲ್ಲೇ ಕಾಣುವುದೇನೋ ಎಂಬ ಅಶಾಭಾವನೆಯೊಂದಿಗೆ ಹೃದಯ ತೆರೆದು ಹರಿಬಿಡುವ ಪ್ರಯತ್ನ ಮಾಡಿದ್ದೇನೆ.

ನಿಮ್ಮ ಉತ್ತೇಜನ-ಸಲಹೆ-ಟೀಕೆಗಳಿಗೆ ಸ್ವಾಗತ!