Thursday, January 20, 2011

ಕನ್ನಡ-ಬಾಲ್ಯ ಕನ್ನಡದ ಮಗುವಿಗೆ ಅಗತ್ಯ!

ಮಗುವಿನ ಮನಸ್ಸು ನಿರ್ಮಲವಾದದ್ದು. ಸುತ್ತಲ ಪರಿಸರದಿಂದ ಆಗುವ ಅನುಭವಗಳನ್ನೇ ಮೆಟ್ಟಿಲಾಗಿಸಿಕೊಂಡು ಮುಂದೆ ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತವೆ. ಅದಕ್ಕೆ ಹೇಳೋದು ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು. ಅದಕ್ಕೆ ಡಿ.ಎಸ್.ರಾಮಸ್ವಾಮಿ ಹೇಳ್ತಾರೆ, "ಬಾಲ್ಯದಲ್ಲಿ ಕಲಿತ ಬುದ್ಧಿ-ಮನಸ್ಸುಗಳೇ ಮುಂದಿನ ದಿನಮಾನಗಳನ್ನು ರೂಪಿಸುವುದರಿಂದ ಎಲ್ಲರ ಬಾಲ್ಯವೂ ಪರಿಶುದ್ಧವಾಗಿರುತ್ತದೆ ಎನ್ನುವ ಮಾತೂ ಇದೆ. ಹಸಿವು, ನೀರಡಿಕೆ, ನಿದ್ದೆಗಳು ಮಾತ್ರ ಮಕ್ಕಳು ದೊಡ್ಡವರನ್ನು ಕಾಡುವಂತೆ ಮಾಡುತ್ತವೆ. ಉಳಿದಂತೆ ಮಕ್ಕಳ ಮನಸ್ಸು ಎಷ್ಟು ನಿರ್ಮಲವಾಗಿರುತ್ತದೆ ಅಂದರೆ ಅದಕ್ಕೆಂದೇ ನಮ್ಮ ಹಿರಿಯರು ಮಕ್ಕಳನ್ನೂ ದೇವರ ಸ್ವರೂಪ ಅಂತ ಕರೆದದ್ದು. ಕೂಡು ಕುಟುಂಬ ವ್ಯವಸ್ಥೆ ಇದ್ದಷ್ಟೂ ದಿನ ಮಕ್ಕಳು ಪಂಕ್ತಿಭೇದವಿಲ್ಲದೇ, ತರತಮಗಳ ಸೋಂಕಿಲ್ಲದೇ ಉಂಡು ಆಡಿ ನಲಿಯುತ್ತಿದ್ದವು. ಅಜ್ಜನೋ, ಅಜ್ಜಿಯೋ. ದೊಡ್ಡಮ್ಮ, ದೊಡ್ಡಪ್ಪನೋ ನೀತಿ ಕತೆಗಳನ್ನು ಹೇಳುವ ಮೂಲಕ ಒಳಿತು ಕೆಡುಕಗಳ ವ್ಯತ್ಯಾಸವನ್ನು ಮನದಟ್ಟು ಮಾಡಿ ಮಗುವಿನ ಮನಸ್ಸಿನಲ್ಲಿ ನೈತಿಕತೆಯ ಬೀಜನೆಟ್ಟು ಬೆಳಸಿರುತ್ತಿದ್ದರು. ಅವರು ಕಲಿಸುವ ಬಾಯಿಪಾಠ, ಮಗ್ಗಿ, ಶ್ಲೋಕ, ಕತೆ, ಜನಪದ ಹಾಡುಗಳು, ಅಲ್ಲದೇ, ಉಳಿದ ಮಕ್ಕಳೊಂದಿಗೆ ಬೆರೆತು ಆಡಿ ನಲಿದು ಬಾಲ್ಯವೆಂಬ ಬೆಲ್ಲದ ರುಚಿ ನಿರಂತರ ಉಳಿಯುವಂತೆ ಅದನ್ನು ಸವಿಯುತ್ತಿದ್ದವು. ನಮ್ಮ ಜನಪದರು ಸೃಷ್ಟಿಸಿರುವ ಕತೆ ಹಾಡುಗಳಲ್ಲಂತೂ ಮಕ್ಕಳಿಗೆ ಇಷ್ಟವಾಗುವ ಗಿಡ,ಮರ,ಪಶು, ಪಕ್ಷಿಗಳೂ ಮಾತನಾಡಿ ಬದುಕಿನ ಸೂಕ್ಷ್ಮಗಳನ್ನು ಮಗುವಿನ ಮನಸ್ಸಿನೊಳಗಿಳಿಸಿ ಆ ಮಗು ತನ್ನ ಭಾವೀ ಜೀವನ ರೂಪಿಸಿಕೊಳ್ಳುವ ನಿಜದ ಯತ್ನವಾಗಿ ಇರುತ್ತಿತ್ತು. ಊರೊಳಗಿನ ಉತ್ಸವ, ಜಾತ್ರೆ, ಹಬ್ಬಗಳಲ್ಲಿ ಮನೆಯವರೆಲ್ಲ ಭಾಗವಹಿಸುವ ಮೂಲಕ ಮನುಷ್ಯ ಸಂಬಂಧಗಳ ಅನಾವರಣವನ್ನು ತಮಗೆ ಗೊತ್ತಿಲ್ಲದೇ ಮಕ್ಕಳು ಅರಿಯುತ್ತಿದ್ದವು. ಶಾಲೆ ಮುಗಿದ ಮೇಲೆ ದೊಡ್ಡಬಯಲಲ್ಲಿ ಚಿನ್ನಿದಾಂಡು, ಕಬಡ್ಡಿಗಳನ್ನಾಡಿ ಊರ ಹೊರಗಿನ ತೋಪಿನಲ್ಲಿ ಮರಕೋತಿ ಆಟವಾಡಿ, ರಜಾ ದಿನಗಳಲ್ಲಿ ಹಳ್ಳದಲ್ಲಿ ಈಜಿ ದೈಹಿಕ ಸಾಮರ್ಥ್ಯದ ಜೊತೆಜೊತೆಗೇ ತಾರ್ಕಿಕ ಪ್ರಜ್ಞೆಯನ್ನೂ ಹಿಂದಿನ ಕಾಲದ ಮಕ್ಕಳು ಪಡೆಯುತ್ತಿದ್ದರು."

ಮನೆತುಂಬ ಮಕ್ಕಳಿರುವ ಕಾಲ ಈಗ ಬದಲಾಗಿದೆ. ವಿಘಟಿತ ಕುಟುಂಬ ವ್ಯವಸ್ಥೆ ಎಲ್ಲ ಮನೆ ಊರುಗಳಲ್ಲೂ ವಿಸ್ತರಿಸಿ ನಗರೀಕರಣದ ನೆರಳು ಮನೆಗೊಂದೇ ಮಗುವೆಂಬ ಸೂತ್ರವನ್ನು ಪಠಿಸಿ,ಹೆತ್ತವರ ಹಣೆಯಲ್ಲಿ ಮಗುವಿನ ಭವಿಷ್ಯದ ಚಿಂತೆಯ ಗೆರೆಯನ್ನು ಢಾಳಾಗಿಸಿದೆ. ಬಾಲ್ಯದ ಆಟೋಟಗಳಿಗಿಂತಲೂ ಅರಿವಿರದ ಭಾಷೆಯ ರೈಮುಗಳನ್ನು ಮನಸ್ಸಿಗೊಗ್ಗದ ಶೈಲಿಯಲ್ಲಿ ಹಾಡಿಸುತ್ತ, ಕೃತಕತೆಯನ್ನೆ ಸಹಜವೆಂದುಕೊಳ್ಳುವ ಹಾಗೆ ಬೆಳಸುತ್ತ ನೈಸರ್ಗಿಕವಾಗಿ ಬಿಡುಗಡೆಯಾಗಬೇಕಿರುವ ಮುಗ್ಧತೆಯ ಆವರಣಕ್ಕೆ ಕೌಶಲ್ಯದ ಹೆಸರಿನ ಮೇಲಾಟಗಳು ದಾಳಿ ಇಟ್ಟಿವೆ. ಸಹಜವಾದ ಬೇಕು ಬೇಡಗಳಿಗಿಂತಲೂ ಒತ್ತಾಯದ ಹೇರಿಕೆಗಳು ಮಕ್ಕಳ ಮುಗ್ಧತೆಯನ್ನೇ ಆಪೋಷನ ತೆಗೆದುಕೊಂಡಿವೆ. ‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು’ ಎಂದು ಹೇಳುತ್ತಲೇ ಆ ಮಕ್ಕಳನ್ನು ಇರುಳು ಕಂಡ ಬಾವಿಗೆ ಹಗಲಲ್ಲಿ ನೂಕುವ ಕಾಯಕ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತಿದೆ, ಅಷ್ಟೆ.

ಮಕ್ಕಳ ಮನಸ್ಸಿನ ವಿಕಾಸತೆಗೆ ತಾಯಿನುಡಿಯ ಅವಶ್ಯಕತೆ ಅಪಾರ. ಪ್ರಾಥಮಿಕ ಶಿಕ್ಷಣ ತಾಯಿನುಡಿಯಿಂದಾಗ ಮಾತ್ರ ಅವರ ಯೋಚನಲಹರಿ ಗಡಿಗಳನ್ನು ದಾಟಿ ಹಾರುವುದ್ದಕ್ಕೆ ಸಾದ್ಯ. ಇದನ್ನರಿಯದೆ ದುಡ್ಡು ಮಾಡೋ ತವಕದಲ್ಲಿ, ಮಕ್ಕಳ ಬಾಲ್ಯವನ್ನೇ ಕೊಲ್ಲುತ್ತಿದ್ದೇವೇನೋ  ಎಂಬ ಪಾಪಪ್ರಜ್ಞೆ!

Monday, December 27, 2010

ತಾಯಿ ನುಡಿಗೆ ಪ್ರಾಮುಖ್ಯತೆ

ತಾಯಿನುಡಿಗೆ ಪ್ರಾಮುಖ್ಯತೆ ಕೊಡದೆ ಬೇರೆ ಭಾಷೆಗಳಿಗೆ ಮಣೆ ಹಾಕೋದ್ರಿಂದ ಏನೆಲ್ಲಾ ಅನಾಹುತಗಳು ಆಗಬಹುದು ಅಂತ ಪಟ್ಟಿ ಮಾಡ್ತಾ ಹೋದ್ರೆ ಸಾಕಸ್ಟು ವಿಚಾರಗಳಲ್ಲಿ ನಾವು ಹಿಂದೆ ಬಿದ್ದೀರೋದು ತಿಳಿಯುತ್ತೆ. ಅದ್ರಲ್ಲಿ ಮುಖ್ಯವಾಗಿರೋದು ವಿಜ್ಞಾನದಲ್ಲಿ ಹೊಸ ಹೊಸ ಅನ್ವೇಷಣೆಗಳು ನಡೆಯದಿರೊದು - ಪ್ರತಿಯೊಂದಕ್ಕೂ ಅಮೇರಿಕನ್ನರ ಮೇಲೆ ಅವಲಂಬಿತವಾಗಿರೋದು ಎದ್ದು ಕಾಣುತ್ತೆ.
ಹಲವಾರು ಭಾಷಾ-ಪರಿಣಿತರ ಹಾಗೂ ಬುದ್ದಿಜೀವಿಗಳ ಅಭಿಪ್ರಾಯದಂತೆ, ಏನಾದ್ರೂ ಹೊಸತನ ಹೂಟ್ಟೊದು ಅದು ಅಗತ್ಯವೆಂದಿನಿಸಿದಾಗ ಮಾತ್ರ. ಆದ್ರೆ ನಾವೆಲ್ರು ನಮ್ಮ ನಾಡಿಗೆ ಏನು ಅಗತ್ಯವಿದೆ ಅನ್ನೋದನ್ನ ಹುಡುಕೋ ಬದ್ಲು ಬೇರೆಯವರ ಅಗತ್ಯಗಳ್ನ ಪೂರ್ತಿ ಮಾಡೋ ನಿಟ್ಟಿನಲ್ಲೇ ಬದುಕ್ತಾ ಇದ್ದೀವಿ. ಕೇವಲ ಅಮೇರಿಕನ್ನರ ಅಗತ್ಯಗಳನ್ನ ಪೂರೈಸೊದ್ದಿಕ್ಕೆ ಸಾಕಗುವಸ್ಟು ಅಹರ್ತೆ ಪಡೆದು ಯಂತ್ರಗಳ ರೀತಿ ಕೆಲ್ಸ ಮಾಡ್ಕೊಂಡು, ಇದನ್ನೇ ಅಭಿವೃದ್ದಿ ಅಂದ್ಕೊಂಡು ಕತ್ಲಲ್ಲಿ ಬದುಕ್ತಾ ಇದ್ದೆವೆ. ತನ್ನ ಹುಟ್ಟುಭಾಷೆ / ತಾಯಿ ನುಡಿಯಲ್ಲೇ ಎಲ್ಲಾ ವಿಷಯಗಳನ್ನ ಅರ್ಥ ಮಾಡ್ಕೊಂಡು, ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡವನ್ನೇ ಬಳಸಿ, ನಮ್ಮ ಜೀವನಕ್ಕೆ ಬೇಕಾಗುವಂತ ವಸ್ತುಗಳ್ನ ನಮ್ಮಲ್ಲೇ ತಯಾರು ಮಾಡುವಸ್ಟು ನಿಪುಣತೆ ಬೆಳಸ್ಕೊಂಡ್ರೆ ಮಾತ್ರ ಬೇರೆ ದೇಶಗಳಿಗಿಂತ ಭಿನ್ನವಾಗಿ ಅಭಿವೃದ್ದಿ ಹೊಂದಲು ಸಾಧ್ಯ.

ಈ ವಿಷಯದಲ್ಲಿ ಕನ್ನಡಿಗರು ಬೇಗನೆ ಎಚ್ಚೆತ್ತುಕೊಳ್ಳಬೇಕಿದೆ!

Thursday, December 16, 2010

ಕರ್ನಾಟಕದ ಏಳಿಗೆಗೆ ಕನ್ನಡಿಗರ ತಾಯ್ನುಡಿಯಾದ ಕನ್ನಡದಿಂದಲೇ ಮಾತ್ರ ಸಾದ್ಯ!

ಕರ್ನಾಟಕದ ಏಳಿಗೆಗೆ ಕನ್ನಡಿಗರ ತಾಯ್ನುಡಿಯಾದ ಕನ್ನಡದಿಂದಲೇ ಮಾತ್ರ ಸಾದ್ಯ! ಭಾರತ ಒಂದು ಭಾಷಾವಾರು ಪ್ರಾಂತ್ಯಗಳ ಒಕ್ಕೂಟವಾಗಿರೋದ್ರಿಂದ, ಪ್ರತಿಯೊಂದು ರಾಜ್ಯದ ಜನರು ತಮ್ಮ ಮಾತೃ ಭಾಷೆಗಳನ್ನೇ ಸಾಧನವಾಗಿ ಬಳಸಿದ್ದಲ್ಲಿ ಮಾತ್ರ ಭಾರತದ ಅಭಿವೃದ್ದಿ. 

ಕರ್ನಾಟಕ ಕುಲಪುರೋಹಿತರಾದ ಆಲೂರು ವೆಂಕಟರಾಯರೇ ಹೇಳುವಂತೆ " ಭರತ ಖಂಡವಿಲ್ಲದೆ ಕರ್ನಾಟಕ ಮುಂತಾದ ಪ್ರಾಂತಗಳು ಇಲ್ಲವೆಂಬುದು ಎಷ್ಟು ನಿಜವೋ ಅಷ್ಟೇ, ಕರ್ನಾಟಕ ಮುಂತಾದ ಪ್ರಾಂತಗಳಿಲ್ಲದೆ ಭರತಖಂಡವಿಲ್ಲವೆಂಬುದೂ ನಿಜವು. ಭಾರತೀಯನಲ್ಲದವನು ಹೇಗೆ ನಿಜವಾದ ಕರ್ನಾಟಕೀಯನಾಗಲಾರನೋ ಹಾಗೆಯೇ ಕರ್ನಾಟಕೀಯನಲ್ಲದವನು ನಿಜವಾದ ಭಾರತೀಯನಾಗಲಾರನು. ಕರ್ನಾಟಕವು ಕನ್ನಡಿಗರ ದೇಹವು ಮತ್ತು ಜೀವವು. ಪ್ರತಿಯೊಬ್ಬ ಜೀವನೂ ಹೇಗೆ ತನ್ನ ಜೀವದ ಮುಖಾಂತರವಾಗಿಯೇ ಪರಮಾತ್ಮನನ್ನು ಸಾಕ್ಷೀಕರಿಸಿಕೊಳ್ಳತಕ್ಕದ್ದೋ ಹಾಗೆ, ಕರ್ನಾಟಕಸ್ಥರು ಕರ್ನಾಟಕದ ಮುಖಾಂತರವಾಗಿಯೇ ಭಾರತಮಾತೆಯ ಸಾಕ್ಷಾತ್ಕಾರವನ್ನು ಮಾಡಿಕೊಳ್ಳತಕ್ಕದ್ದು. ಅವರಿಗೆ ಅನ್ಯಮಾರ್ಗವಿಲ್ಲ. ಅನ್ಯಮಾರ್ಗದಿಂದ ಅವಳನ್ನು ಕಾಣಲೆತ್ನಿಸುವುದು ಆತ್ಮವಂಚನೆಯು. ಅದು ಪರರ ಮುಖಾಂತರವಾಗಿ ಪರಮಾತ್ಮನನ್ನು ಕಾಣಲಿಚ್ಛಿಸುವಂತೆ ನಿರರ್ಥಕವು. ಭಾರತದ ಸೇವೆಯನ್ನು ಮಾಡುವುದಕ್ಕೆ ಹದಿನಾರಾಣೆ ಕರ್ನಾಟಕತ್ವವನ್ನು ಹೊಂದಿರುವುದರಿಂದ ಮಾತ್ರಾ ಸಾಧ್ಯ. ಅರೆಕೊರೆ ಕರ್ನಾಟಕಸ್ಥರು ಹಾಗೆ ಮಾಡಲಾರರೆಂಬುದು ಸ್ಪಷ್ಟ."
ಎಸ್ಟು ಸತ್ಯವಿದೆ ಅಲ್ವೇ?

ಆದ್ರೆ ನಮ್ಮ ಗ್ರಹಚಾರ ಮತ್ತು ತಮಾಷೆ ನೋಡಿ.
 ಶಾಲೆಗಳಲ್ಲಿ ಇಂದಿಗೂ, ಹಿಂದೀ, ಭಾರತದ ರಾಷ್ಟ್ರಭಾಷೆ ಅನ್ನೋ ಸುಳ್ಳು ಮಾಹಿತಿಯನ್ನ ಮಕ್ಕಳ ತಲೇಲಿ "ರಾಷ್ಟ್ರೀಯತೆ"ಯ ನೆಪವೊಡ್ಡಿ ತುರುಕ್ತಾನೇ ಇದ್ದಾರೆ.ಇದರಿಂದ ತಮ್ಮ ಭಾಷೆಯನ್ನ ಮಾತ್ನಾಡೊದೆ ಕೀಳು ಎಂಬೋ ಸಂಕುಚಿತ ಮನೋಭಾವನೆ ಬೆಳಿತ ಇರೋದಂತೂ ಸತ್ಯ.
ಈ ದಶಕದ ಬಹಳ ಮುಖ್ಯವಾದ ಅನ್ವೇಷಣೆಗಳು.

೧) ಮಾನವನ ಸಂಪೂರ್ಣ DNA ಬೆಳಕಿಗೆ!:
ಸುಮಾರು ೨೦೦೧ ರಲ್ಲಿ ಸಂಕೀರ್ಣ ಮಾನವ ಜೀವಿಗಳ ರಚನೆಗೆ ತಳಹದಿಯಾದ DNA ಜೋಡಣೆ (adenine, guanine, thaimine ಮತ್ತು cytosine ಎಂಬ ನಾಲ್ಕು ರಾಸಾಯನಿಕ ಕಣಗಳ (nucleotides) ವಿವಿಧ ಜೋಡಣೆ) ಯನ್ನು ಸಂಪೂರ್ಣವಾಗಿ ಕಂಡುಹಿಡಿಯಲಾಯಿತು. ಇದಕ್ಕೂ ಮೊದಲು ವಿಜ್ಞಾನಿಗಳಿಗೆ ಗೊತ್ತಿದ್ದ ಅಂಶವೆಂದರೆ DNA ಜೋಡಣೆ, ಜೀವ ಸಂಕುಲದ ಅಗಾಧ ವಿವಿಧತೆಗೆ ಕಾರಣವೆಂಬುದು ಅಸ್ಟೆ. ಆದರೆ ಈ ಸಂಕೀರ್ಣ DNA ಹೇಗೆ ನಮ್ಮೆಲ್ಲೆರ ರಚನೆಗೆ ನಾಂದಿಯಾಯಿತು ಎಂಬುದರ ಜೊತೆಗೆ, ಹೇಗೆ ಮತ್ತು ಏಕೆ ಮಾನವರು ಹಲವಾರು ರೋಗಗಳಿಗೆ ಬಲಿಯಾಗುತ್ತಾರೆ ಎಂಬುದನ್ನು ಬಹಳ ಸಂಕ್ಷಿಪ್ತವಾಗಿ ತಿಳಿಯಲು ಕೂಡ ಸಹಕಾರಿಯಾಗಿದೆ. ಈ ಮಾಹಿತಿಗಳಿಂದ ಇನ್ನಸ್ಟು ಹೊಸ ಹೊಸ ವಿಚಾರಗಳು ಬೆಳಕಿಗೆ ಬರಲ್ಲಿದ್ದು ಹಲವಾರು ರೋಗಗಳಿಗೆ ಮದ್ದನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಲ್ಲಿದ್ದೇವೆ.

೨) ಉರಿಯೂವಿಕೆ (Inflammation) ಯ ಇನ್ನೊಂದು ಮುಖ:

ಆಕಸ್ಮಿಕವಾಗಿ ಕಯ್ ಬೆರಳು ಕೊಯ್ದುಕೊಂಡ್ರೆ ತಕ್ಷಣವೇ ನಮ್ಮ ರಕ್ತದಲ್ಲಿರುವ ಸೈನಿಕ ಜೀವ ಕೋಶಗಳು (Immune cells) ಮುನ್ನುಗ್ಗಿ ಹೊರ ಜೀವಿಗಳಿಂದ ಯಾವುದೇ ರೀತಿಯ ತೊಂದರೆಯಾಗದಂತೆ ರಕ್ಷಿಸುತ್ತವೆ. ಆದರೆ ಇದೆ ಸೈನಿಕ ಜೀವ ಕೋಶಗಳು ಹಲವಾರು ಕೆಟ್ಟ ರೋಗಗಳಿಗೂ(ಉದಾಹರಣೆ: ಕ್ಯಾನ್ಸರ್, ಮೆದುಳಿಗೆ ಸಂಬಂಧಪಟ್ಟವು, ಹೃದಯಕ್ಕೆ ಸಂಬಂಧಪಟ್ಟವು) ಕಾರಣವಾಗಬಹುದು ಎಂಬ ಅಂಶ ಬೆಳಕಿಗೆ ಬಂದಿದೆ.

Monday, December 24, 2007

ನಾಗರಿಕತೆಯ ಸೃಷ್ಟಿ- ೧

ಪ್ರಾಣಿಗಳಂತೆ ವರ್ತಿಸುತ್ತಿದ್ದ ಮಾನವರು, ಆಹಾರ-ವಸತಿಗಾಗಿ ತಮ್ಮ-ತಮ್ಮಲ್ಲೇ ಹೋರಾಟ ನಡೆಸಿ, ಒಬ್ಬರನ್ನೊಬ್ಬರು ಕೊಲ್ಲತೊಡಗಿದರು. ಹೀಗಾಗಿ, ಕಿತ್ತಾಡುವ ಮಾನವ ತಳಿಗಳು (species) ತಾವಾಗೆ ನಾಶವಾಗುತ್ತ ಬಂದವು. ಕಾಲ ಕ್ರಮೇಣ ಈ ವರ್ತನೆಯಿಂದ ದೂರವುಳಿದ ಮಾನವ ಜೀವಿಗಳ ಸಂಖ್ಯೆ ಅಧಿಕವಾಗಿ ಒಬ್ಬರಿಗೊಬ್ಬರು ಸಹಾಯ ಮಾಡುತ್ತ ಬೇರೆ ಪ್ರಾಣಿ-ಪಕ್ಷಿಗಳ ಅನುಕೂಲ ಪಡೆಯುತ್ತ ತಮ್ಮ ತಳಿಯನ್ನು ಕಾಪಾಡಿಕೊಳ್ಳ ತೊಡಗಿದರು.


ಮಾನವ, ಭೂಮಿಯ ಹಲವಾರು ಭಾಗಗಳನ್ನು ತನ್ನ ಜೀವನಾನುಕೂಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಳುತ್ತ ನಾಗರಿಕತೆಯಾ ತೊಟ್ಟಿಲ್ಲನ್ನು ತೂಗ ತೊಡಗಿದ. ಆಹಾರಕ್ಕಾಗಿ ಸಿಕ್ಕ ಪ್ರಾಣಿ-ಪಕ್ಷಿಗಳನ್ನೂ ಕೊಲ್ಲುತ್ತ, ಮರ-ಗಿಡಗಳಿಂದ ದೊರುಕುವ ಎಲೆ, ಹಣ್ಣುಗಳನ್ನೂ ತಿನ್ನುತ್ತ ತನ್ನ ತಳಿಯಾ ಅಭಿವೃದ್ಧಿಯನ್ನು ಕಂಡು ಕೊಂಡ. ಬೇಟೆ, ಬೆಂಕಿ, ಅಡಿಗೆ, ವ್ಯವಸಾಯ ಹಾಗು ಅದಕ್ಕೆ ಬೇಕಾಗುವ ಸಲಕರಣೆಗಳ ರಚನೆ; ಹೀಗೆ ತನ್ನ ಬುದ್ದಿಶಕ್ತಿಯ ಉಪಯೋಗವನ್ನು ಎಲ್ಲದರಲ್ಲೂ ಬಳಸುತ್ತಲೇ ಬಂದ.

Friday, December 21, 2007

ಬಾಲ ಹೋಗಿ ಬುದ್ದಿ ಬಂತು!

ಬಾಲ ಹೋಗಿ ಬುದ್ದಿ ಬಂತು!

DNA ಯಲ್ಲಿನ ಈ ಶೇಕಡ ೧ ರಸ್ಟು ವ್ಯತ್ಯಾಸವೇ ಮಾನವನ ಬುದ್ದಿ ಶಕ್ತಿಗೆ ಕಾರಣವಾಗಿರುವುದು. ಪರಿಸರದಲ್ಲಿನ ವಿಕೋಪಗಳಿಗೆ ತಕ್ಕಂತೆ ದೇಹದ ಮಾರ್ಪಾಡುಗಳೊಂದಿಗೆ ಮೆದುಳಿನ ವಿಕಾಸನೆಯು ನಡೆದು ಬಂದಿದೆ. ದೊರಕಿರುವ ಪಳೆಯುಳಿಕೆ ಹಾಗು ಹಲವಾರು ವೈಜ್ಞಾನಿಕ ಪರಿಶೀಲನೆಗಳ ಆಧಾರದ ಮೇಲೆ ಹೇಳುವದಾದರೆ, ಮಾನವ ಜೀವಿಯ ವಿಕಾಸನೆ ಸಹಸ್ರ ಸಹಸ್ರಾರು ವರ್ಷಗಳ ಹಿಂದೆ ಮಧ್ಯ ಆಫ್ರಿಕಾದಲ್ಲಿ ಪ್ರಾರಂಭಗೊಂಡು, ಸುಮಾರು ೨೦೦,೦೦೦ ವರ್ಷಗಳ ಹಿಂದೆ ನಮ್ಮ ಮೆದುಳಿನ ರಚನೆ ಪ್ರಾರಂಭವಾಗಿದೆ.

ಮೆದುಳಿನ ವಿಕಾಸನೆಗೆ ಆಧಾರವಾಗಿ ದೊರಕಿರುವ ಇನ್ನೊಂದು ಅಂಶವೆಂದರೆ ತಲೆಬುರುಡೆಯ ತೂಕ ಮತ್ತು ಗಾತ್ರ. ೧೦೦ ಗ್ರಾಂ ಇದ್ದ ಮೆದುಳು ಮಾನವನಲ್ಲಿ ೧೫೦೦ ಗ್ರಾಂ ಆಗಿರುವುದು!

ಹಾಗೆಯೇ ನಡೆದುಬಂದ ಮಂಗ-ಮಾನವನ ಬೆಳವಣಿಗೆ ಸುಮಾರು ೮೦,೦೦೦ ವರ್ಷಗಳ ಹಿಂದೆ ಚಿಂಪಾಂಜಿಯಿಂದ ದೂರವಾಗಿ ಮನುಷ್ಯನ ರೂಪು ಪಡೆದಿದೆ.
ಹೀಗೆ ಮಂಗನಿಂದ ಮಾನವನಾದ "ಮನುಷ್ಯ", ಇಡೀ ಭೂಮಿಯನ್ನೇ ತನ್ನ ಮನೆಯಾಗಿಸಿಕೊಂಡು ಬೇರೆಲ್ಲ ಜೀವ ಸಂಕುಲಗಳಿಂದ ಉಪಯೋಗ ಪಡೆದುಕೊಂಡು ತನ್ನ ಬೆಳವಣಿಗೆಯ ಶಿಖರವನ್ನು ಏರುತ್ತಲೇ ಹೊರಟಿದ್ದಾನೆ.

Friday, December 14, 2007

ವಿವಿಧ ಜೀವಿಗಳ ಸೃಷ್ಟಿ

ಜೀವ ಸೃಷ್ಟಿಯಾ ನಿಜ ಕತೆಯನ್ನು ಮುಂದುವರಿಸುತ್ತಾ...
ವಿವಿಧತೆಗೆ ಕಾರಣವೇನು?

adenine, guanine, thaimine ಮತ್ತು cytosine ಎಂಬ ನಾಲ್ಕು ರಾಸಾಯನಿಕ ಕಣಗಳ (nucleotides) ವಿವಿಧ ಜೋಡಣೆಯ ರೂಪವಾದ DNA, ಪ್ರಪಂಚದ ಮೇಲಿರುವ ಎಲ್ಲ ಜೀವ ಸಂಕುಲದ ಅಗಾಧ ವಿವಿಧತೆಗೆ ಕಾರಣವೆಂಬುದನ್ನು ನಂಬಲಸಾದ್ಯವಾದರು ನಿಜ. ಈ ನಾಲ್ಕು nucleotides ಗಳ ಜೋಡಣೆಯಲ್ಲಿ ಉಂಟಾಗುವ ಏರು-ಪೇರುಗಳು ಒಂದು ಕೋಶದ (single celled) ಜೀವಿಗಳಾದ ಬ್ಯಾಕ್ಟೀರಿಯದಿಂದ ಪ್ರಾರಂಭವಾಗಿ ಅತೀ ಸಂಕೀರ್ಣ ಮಾನವ ಜೀವಿಗಳ ರಚನೆಗೆ ತಳಹದಿ!
ವಿಕಾಸವಾದದ ಬೇರಾದ ಈ ಪರಿಷ್ಕರಣೆಯನ್ನು ಸಮರ್ಥಿಸುವಲ್ಲಿ ನಮ್ಮ ತೀರ ಹತ್ತಿರ ಸಂಬಧಿಗಳಾದ ಚಿಂಪಾಂಜಿಯಾ DNA ರಚನೆ ತುಂಬ ಸಹಕಾರಿಯಾಗಿದೆ. ಈ ರಚನೆ ಶೇಕಡ ೯೯ ರಸ್ಟು ಮಾನವ DNA ಗೆ ಸಮನಾಗಿರುವುದು ಅಚ್ಚರಿ ಹಾಗು ಕುತೂಹಲವನ್ನು ಕೆರಳಿಸುತ್ತದೆ.